Saturday, August 16, 2014

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ.

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ  ದೇವಸ್ಥಾನ ಹೆಮ್ಮರಗಾಲ.

ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ` ಎಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ದೈವ ಸಂತಾನ ವೇಣುಗೋಪಾಲ ಸ್ವಾಮಿ. ಈ ದೇವರನ್ನು `ಹುಚ್ಚು ವೇಣುಗೋಪಾಲ ಸ್ವಾಮಿ` ಎಂದೂ ಹೆಸರುವಾಸಿ. ಎರಡು ಎಕರೆ ವಿಸ್ತಿರ್ಣದಲ್ಲಿರುವ ಈ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಯಿತು. ದ್ವಾಪರ ಯುಗದಲ್ಲಿ ಕೌಂಡಿಲ್ಯ ಮಹರ್ಷಿಗಳು ವೇಣುಗೋಪಾಲ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಐತಿಹ್ಯವಿದೆ. ಹೆಮ್ಮರಗಾಲಕ್ಕೆ ಮೊದಲು ಹೇಮಪುರಿ ಎಂಬ ಹೆಸರಿತ್ತು.
ಕೌಂಡಿಲ್ಯ ಮಹರ್ಷಿಗಳಿಗೆ ಇಲ್ಲಿ ವಾಸವಾಗಿದ್ದ ಒಬ್ಬ ರಾಕ್ಷಸ ತುಂಬಾ ತೊಂದರೆ ನೀಡುತ್ತಿದ್ದ. ಅವನ ನಿಗ್ರಹಕ್ಕೆ ಕೌಂಡಿಲ್ಯ ಮಹರ್ಷಿಗಳು ಪ್ರಾರ್ಥಿಸಿದಾಗ ದೇವರು ನರಸಿಂಹನ ರೂಪದಲ್ಲಿ ಪ್ರತ್ಯಕ್ಷನಾಗಿ ರಾಕ್ಷಸನ ಸಂಹಾರ ಮಾಡಿದ.  ರಾಕ್ಷಸನನ್ನು ನೆಲಕ್ಕೆ ಅಪ್ಪಳಿಸಿದಾಗ ಅವನ ಕಾಲು ಈ ಹೇಮಪುರಿ  ಕ್ಷೇತ್ರದಲ್ಲಿ ಬಂದು ಬಿತ್ತು. ಇದರಿಂದ ಈ ಕ್ಷೇತ್ರಕ್ಕೆ ಹೆಮ್ಮರಗಾಲ ಎಂಬ ಹೆಸರು ಬಂತು ಎನ್ನಲಾಗಿದೆ. ಕ್ಷೇತ್ರ ರಕ್ಷಣೆಗಾಗಿ ನರಸಿಂಹ ಸ್ವಾಮಿ ಸಿದ್ಧಿದಂಡ ನೀಡಿದ. ಇದನ್ನು ನರಸಿಂಹ ದಂಡ ಅಥವಾ ಕೌಂಡಿಲ್ಯ ದಂಡ ಎಂದು ಕರೆಯಲಾಯಿತು. ಇಂದಿಗೂ ಈ ದಂಡವನ್ನು ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರ ಭಕ್ತ ದರ್ಶನಕ್ಕೆ ಇರಿಸುವ ಪದ್ಧತಿ ಇದೆ.
ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಯಿತು. ಚೋಳ ಮಹಾರಾಜನಿಗೆ ಹನ್ನೊಂದು  ಹೆಣ್ಣುಮಕ್ಕಳು. ತನಗೆ ಗಂಡು ಸಂತಾನ ಬೇಕೆಂದು ರಾಜ ವೇಣುಗೋಪಾಲಸ್ವಾಮಿಯನ್ನು ಪ್ರಾರ್ಥಿಸಿದ. ರಾಜನ  ಕನಸಿನಲ್ಲಿ  ದಿವ್ಯವಾಣಿಯೊಂದು ವಿಷ್ಣು ರೂಪದಲ್ಲಿ ಹೇಳಿದ ಅನುಭವವಾಯಿತು. ಕನಸಿನ ಪ್ರಕಾರ ಅರಮನೆ ಮುಂದಿನ ಹಾದಿಯಲ್ಲಿ ತುಳಸಿ ದಳ ಬಿದ್ದಿರುವ ದಾರಿಯಲ್ಲಿ ಬರುವಂತೆಯೂ ಎಲ್ಲಿ ರಥ ನಿಂತು ಬಿಡುತ್ತದೆಯೋ ಅಲ್ಲಿ ದೇವಸ್ಥಾನ ನಿರ್ಮಾಣ ಮಾಡುವಂತೆ ದೇವರು ಹೇಳಿದಂತೆ ರಾಜನಿಗೆ ಭಾಸವಾಯಿತು. ದೇವರ ವಾಣಿಯಂತೆ  ರಾಜನ ರಥವು ಇಂದಿನ ಕೌಂಡಿಲ್ಯ ಕ್ಷೇತ್ರದಲ್ಲಿ ನಿಂತು ಬಿಟ್ಟಿತು. ಆದರೆ ರಾಜ ಬೇಡಿದ್ದ ಗಂಡು ಮಗುವಾಗದೇ ಮತ್ತೆ ಹೆಣ್ಣು ಮಗು ಜನನವಾಯಿತು. ಬೇಸರಗೊಂಡ ರಾಜ ಹೆಣ್ಣುಮಗುವನ್ನು ತೆಗೆದುಕೊಂಡು ಹೋಗಿ ದೇವರ ಪಾದದ ಮುಂದೆ ಇಟ್ಟು ಪ್ರಾರ್ಥಿಸುತ್ತಾನೆ. ಆಗ ಹೆಣ್ಣು ಮಗುವು ಗಂಡಾಗಿ ಪರಿವರ್ತನೆ ಆಯಿತು. ಈ ಪವಾಡ ಕಂಡು ರಾಜನಿಗೆ ಸಂತೋಷ ಹಾಗೂ ಆಶ್ಚರ್ಯವಾಯಿತು. ಚೋಳರಾಜ ಹೆಣ್ಣು ಮಗು ಗಂಡಾಗಿ ಪರಿವರ್ತನೆಯಾದ  ಕಾರಣ ದೇವರನ್ನು `ಹುಚ್ಚು ಗೋಪಾಲ ಸ್ವಾಮಿ` ಎಂದು ಕರೆಯುವ ಪರಿಪಾಠ ಆರಂಭವಾಯಿತು. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ ದೇವರು ಎಂಬ ಕಾರಣಕ್ಕಾಗಿ `ಸಂತಾನ ಗೋಪಾಲ ಸ್ವಾಮಿ` ಎಂದು ಕರೆಯಲಾಗುತ್ತದೆ.
ವೈಶಿಷ್ಟ್ಯ: ಐದು ಅಡಿಗಳ ಎತ್ತರದ ಕೊಳಲನೂದುತ್ತಿರುವ ವೇಣುಗೋಪಾಲಸ್ವಾಮಿ ಆದಿಶೇಷನ ಹೆಡೆಯ ಮೇಲೆ ನಿಂತಿದ್ದಾನೆ. ಸ್ವಾಮಿಯ ಶಿರಸ್ಸು ಎಡಭಾಗಕ್ಕೆ ಸ್ವಲ್ಪ ಬಾಗಿದೆ. ಬಲ ಕಣ್ಣು ಮೇಲಕ್ಕೆ ಮತ್ತು ಎಡ ಕಣ್ಣು ಕೆಳಕ್ಕೆ ದೃಷ್ಟಿ ಹರಿಸಿದೆ. ವಿಗ್ರಹದ ಬಲಗಾಲಿನ ಒಂದು ಬೆರಳು ಮುಂದೆ ಇದ್ದು ನಾಲ್ಕು ಬೆರಳುಗಳು ಹಿಂದಿವೆ. ನರಸಿಂಹ ಸ್ವಾಮಿಯ ಬೀಜಾಕ್ಷರ ಮಂತ್ರದ ಮೇಲೆ ಸ್ವಾಮಿ ನಿಂತಿರುವುದನ್ನು ನೋಡಬಹುದು.
       ವೇಣುಗೋಪಾಲಸ್ವಾಮಿಯ ಅನುಗ್ರಹದಿಂದ ಸಂತಾನ ಭಾಗ್ಯ ದೊರೆಯುತ್ತದೆ ಮತ್ತು ಸಕಲ ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಭಕ್ತರದು. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ವಿಶೇಷ ದರ್ಶನಕ್ಕೆ ಅವಕಾಶವಿದೆ. ಪಡೆಯಬಹುದು.  ದೇವಸ್ಥಾನ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ಮತ್ತು ಮಧ್ಯಾಹ್ನ 3.30ರಿಂದ ಸಂಜೆ 7.30ರವರೆಗೆ ತೆರೆದಿರುತ್ತದೆ.
ಸೇವೆಗಳು: ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ದೇವರಿಗೆ ಅಭಿಷೇಕ, ಬೆಣ್ಣೆ ಅಲಂಕಾರ, ಕಲ್ಯಾಣೋತ್ಸವ, ಶ್ರೀಗಂಧದ ಅಲಂಕಾರ, ಮುತ್ತಿನ ಅಲಂಕಾರ ನಡೆಯುತ್ತದೆ. ಸೇವೆ ಸಲ್ಲಿಸುವ ಭಕ್ತರು ಖುದ್ದಾಗಿ ಸಾಮಗ್ರಿಗಳನ್ನು ತಂದು ಕೊಟ್ಟು ಸೇವೆ ಮಾಡಿಸಬಹುದು, ಇದರೊಂದಿಗೆ ಇಲ್ಲಿ ಪ್ರತಿ ಹುಣ್ಣಿಮೆಯಂದು ಸುದರ್ಶನ ಹೋಮ ನಡೆಯುತ್ತದೆ
ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ

9036395888
https://www.google.co.in/search?newwindow=1&biw=1264&bih=607&q=%E0%B2%B9%E0%B3%86%E0%B2%AE%E0%B3%8D%E0%B2%AE%E0%B2%B0%E0%B2%97%E0%B2%BE%E0%B2%B2&btnG=

1 comment:

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ.

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ  ದೇವಸ್ಥಾನ ಹೆಮ್ಮರಗಾಲ. ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ`...